schema:text
| - ಫ್ಯಾಕ್ಟ್ಚೆಕ್: ಕರ್ನಾಟಕ ಸರ್ಕಾರವು ಹಿಂದೂ ದೇವಾಲಯಗಳ ಆದಾಯದಿಂದ ಅಲ್ಪಸಂಖ್ಯಾತರಿಗೆ ಹಣವನ್ನು ಹಂಚಿಕೆ ಮಾಡಿಲ್ಲ
ಕರ್ನಾಟಕ ಸರ್ಕಾರವು ಹಿಂದೂ ದೇವಾಲಯಗಳ ಆದಾಯದಿಂದ ಅಲ್ಪಸಂಖ್ಯಾತರಿಗೆ ಹಣವನ್ನು ಹಂಚಿಕೆ ಮಾಡಿಲ್ಲ
Claim :
ಕರ್ನಾಟಕ ಸರ್ಕಾರವು ಹಿಂದೂ ದೇವಾಲಯಗಳ ಆದಾಯದಿಂದ ಅಲ್ಪಸಂಖ್ಯಾತರಿಗೆ ಹಣವನ್ನು ಹಂಚಿಕೆ ಮಾಡಲಾಗುತ್ತಿದೆFact :
ಕರ್ನಾಟಕ ಸರ್ಕಾರವು ಹಿಂದೂ ದೇವಾಲಯಗಳ ಆದಾಯದಿಂದ ಅಲ್ಪಸಂಖ್ಯಾತರಿಗೆ ಹಣವನ್ನು ಹಂಚಿಕೆ ಮಾಡಿಲ್ಲಕರ್ನಾಟಕದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಹಿಂದೂ ದೇವಾಲಯಗಳಲ್ಲಿ ಸಂಗ್ರಹಿಸಿದ ನಿಧಿಯಿಂದ 445 ಕೋಟಿ ರೂಪಾಯಿಗಳನ್ನು ವಂಚನೆ ಮಾಡಿದೆ ಮತ್ತು ಮಸೀದಿಗಳು ಮತ್ತು ಚರ್ಚ್ಗಳಿಗೆ 330 ಕೋಟಿ ರೂ.ಗಳನ್ನು ನೀಡಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ವೈರಲ್ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಜೊತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದೆ ಮತ್ತು ಅಲ್ಪ ಸಂಖ್ಯಾತರ ಓಲೈಕೆ ರಾಜಕಾರಣವನ್ನು ಮಾಡುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ನ್ನು ಹಂಚಿಕೊಳ್ಳಲಾಗುತ್ತಿದೆ. ಕರ್ನಾಟಕ ಸರ್ಕಾರ ತನ್ನ ರಾಜ್ಯ ಬಜೆಟ್ ಮಂಡಿಸಿದ ನಂತರ, ಸರ್ಕಾರವು ಹಿಂದೂಗಳ ವಿರುದ್ಧ ನಿಧಿ ಹಂಚಿಕೆಯಲ್ಲಿ ಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿಲಾಗಿದೆ.
ಫೆಬ್ರವರಿ 14, 2025ರಂದು ʼಸಾಫ್ರಾನ್ ಸೋಲ್ʼ ಎಂಬ ಎಕ್ಸ್ ಖಾತೆದಾರರೊಬ್ಬರು ʼKarnataka Congress loots ₹445 Cr from temples & gifts ₹330 Cr to mosques & churches, whose income doesn’t even contribute to the exchequer. This isn’t governance, it’s blatant appeasement. Wake up, Hindusʼ ಎಂಬ ಶೀರ್ಷಿಕೆಯೊಂದಿಗೆ ಚಿತ್ರವೊಂದನ್ನು ಪೋಸ್ಟ್ ಮಾಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕರ್ನಾಟಕ ಕಾಂಗ್ರೆಸ್ ದೇವಸ್ಥಾನಗಳಿಂದ ₹445 ಕೋಟಿ ಲೂಟಿ ಮಾಡಿದೆ ಮತ್ತು ಮಸೀದಿಗಳು ಮತ್ತು ಚರ್ಚ್ಗಳಿಗೆ ₹ 330 ಕೋಟಿ ಉಡುಗೊರೆಗಳನ್ನು ನೀಡುತ್ತದೆ, ಅವರ ಆದಾಯವು ಬೊಕ್ಕಸಕ್ಕೆ ಸಹ ಕೊಡುಗೆ ನೀಡುವುದಿಲ್ಲ. ಇದು ಆಡಳಿತವಲ್ಲ, ಇದು ಸ್ಪಷ್ಟವಾದ ಸಮಾಧಾನ. ಹಿಂದೂಗಳೇ ಎಚ್ಚೆತ್ತುಕೊಳ್ಳಿʼ ಎಂದು ಬರೆದಿರುವುದನ್ನು ನೋಡಬಹುದು. ಇದರ ಜೊತೆಗೆ ಸಿಎನ್ಎನ್-ನ್ಯೂಸ್18 ಚಾನೆಲ್ನಲ್ಲಿ ನಡೆದ ಸುದ್ದಿ ಚರ್ಚೆಯ ಸಂದರ್ಭದಲ್ಲಿ ತೆಗೆದ ಸ್ಕ್ರೀನ್ಗ್ರ್ಯಾಬ್ಗಳನ್ನು ಕೂಡ ಹಂಚಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಹಿಂದೂ ದೇವಾಲಯಗಳ ಹಣವನ್ನು ಲೂಟಿ ಹೊಡೆಯುತ್ತಿದೆ ಎಂದು ಕಿಡಿ ಕಾರುತ್ತಿದ್ದಾರೆ, ಹಾಗೆಯೇ ವೈರಲ್ ಆಗಿರುವ ಪೋಸ್ಟ್ ಅನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ.
ವೈರಲ್ ಆದ ಸುದ್ದಿಗ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ವಿನೋದ್ ಬನ್ಸಾಲ್ ಎಂಬ ಎಕ್ಸ್ ಖಾತೆದಾರ ಫೆಬ್ರವರಿ 15, 2025ರಂದು ʼKarnataka congress govt has collected Rs. 445 crores from hindu temples and allocated 330 cr to Muslim and Christian institutions in the year 2023-24. Moreover it had provided for appointing non Hindus in the management and control of Hindu Temples? It's too much. Now the State Government must leave our pious places of worship to the Hindu society and stop its anti-hindu practicesʼ ಎಂಬ ಶೀರ್ಷಿಕೆಯೊಂದಿಗೆ ʼಸಿಎನ್ಎನ್ ನ್ಯೂಸ್ 18ʼ ಚಾನೆಲ್ನಲ್ಲಿ ಬಂದಂತಹ ಚಿತ್ರವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕರ್ನಾಟಕ ಕಾಂಗ್ರೆಸ್ ಸರ್ಕಾರವು ರೂ. 2023-24ನೇ ಸಾಲಿನಲ್ಲಿ ಹಿಂದೂ ದೇವಾಲಯಗಳಿಂದ 445 ಕೋಟಿ ರೂ. ಮತ್ತು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಂಸ್ಥೆಗಳಿಗೆ 330 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಇದಲ್ಲದೆ ಹಿಂದೂ ದೇವಾಲಯಗಳ ನಿರ್ವಹಣೆ ಮತ್ತು ನಿಯಂತ್ರಣದಲ್ಲಿ ಹಿಂದೂಯೇತರರನ್ನು ನೇಮಿಸಿಕೊಳ್ಳಲು ಅವಕಾಶ ನೀಡಲಾಗಿತ್ತು? ಇದು ತುಂಬಾ ಹೆಚ್ಚು. ಈಗ ರಾಜ್ಯ ಸರ್ಕಾರವು ನಮ್ಮ ಧಾರ್ಮಿಕ ಪೂಜಾ ಸ್ಥಳಗಳನ್ನು ಹಿಂದೂ ಸಮಾಜಕ್ಕೆ ಬಿಟ್ಟುಕೊಡಬೇಕು ಮತ್ತು ಅದರ ಹಿಂದೂ ವಿರೋಧಿ ಆಚರಣೆಗಳನ್ನು ನಿಲ್ಲಿಸಬೇಕು.ʼ ಎಂಬ ಶೀರ್ಷಿಕೆಯನ್ನೀಡಿರುವುದನ್ನು ನೋಡಬಹುದು.
ಫೆಬ್ರವರಿ 23,2025ರಂದು ಎಕ್ಸ್ ಖಾತೆದಾರರೊಬ್ಬರು 'Free Hindu Temples From Govt Control' #FreeHinduTemplesʼ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ನ್ನು ಹಂಚಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ಕ್ಲೇಮ್ನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಹಿಂದೂ ದೇವಾಲಯಗಳ ಹಣವನ್ನು ಚರ್ಚ್ ಹಾಗೂ ಮಸೀದಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದಲ್ಲಿ ಯಾವುದೇ ಸತ್ಯಾಂಶವಿಲ್ಲ. ಕರ್ನಾಟಕ ಸರ್ಕಾರವು ಹಿಂದೂ ದೇವಾಲಯಗಳ ಆದಾಯದಿಂದ ಅಲ್ಪಸಂಖ್ಯಾತರಿಗೆ ಹಣವನ್ನು ಹಂಚಿಕೆ ಮಾಡಿಲ್ಲ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವೈರಲ್ ಆದ ಸುದ್ದಿಗೆ ಸಂಬಂಧಿಸಿದ ಕೆಲವು ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಫೆಬ್ರವರಿ 16, 2024 ರಂದು, ಕರ್ನಾಟಕ ಸರ್ಕಾರವು 2024-25ರ ಆರ್ಥಿಕ ವರ್ಷದ ಬಜೆಟ್ ಅನ್ನು ಅನಾವರಣಗೊಳಿಸಿತು , ವೈರಲ್ ಪೋಸ್ಟ್ಗಳಲ್ಲಿ ವಿವರಿಸಿದಂತೆ ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ಪುನಃಸ್ಥಾಪನೆಗಾಗಿ 100 ಕೋಟಿ ರೂ.ಗಳು, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ 200 ಕೋಟಿ ರೂ.ಗಳು ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಕಾರ್ಯಕ್ರಮಗಳಿಗಾಗಿ 393 ಕೋಟಿ ರೂ.ಗಳನ್ನು ಹಂಚಿಕೆ ಮಾಡಿತು. ಹೆಚ್ಚುವರಿಯಾಗಿ, ಜೊತೆಗೆ ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ಸೇರಿದಂತೆ ಇತರ ಉಪಕ್ರಮಗಳಿಗೆ ಹಣವನ್ನು ಗೊತ್ತುಪಡಿಸಲಾಯಿತು. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಜೊತೆಗೆ, ಸರ್ಕಾರವು ಸಿಖ್ಖರು, ಜೈನರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಹಣವನ್ನು ಹಂಚಲಾಗಿದೆ. ಈ ಹಂಚಿಕೆಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ವಿಭಾಗದ ಅಡಿಯಲ್ಲಿ ಮಾಡಲಾಗಿದೆ ಎಂದು ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು.
2024ರಲ್ಲಿ ನಡೆದ 25ನೇ ಬಜೆಟ್ಗೆ ಸಂಬಂಧಿಸಿದ ಕರ್ನಾಟಕ ಸರ್ಕಾರದ ಅಧಿಕೃತ ಪೇಜ್ನಲ್ಲಿ 2024-2025ಕ್ಕೆ ಸಂಬಂಧಿಸಿದ ಬಜೆಟ್ ವಿವರಗಳಿರುವ ಒಂದು ವರದಿ ನಮಗೆ ದೊರೆಯಿತು. ಈ ವರದಿಯಲ್ಲಿ ವಕ್ಫ್ ಆಸ್ತಿಗಳು ಮತ್ತು ಕ್ರಿಶ್ಚಿಯನ್ ಸಮುದಾಯಗಳ ಅಭಿವೃದ್ಧಿಗೆ 330 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದರೂ, ಇದನ್ನು ಹಿಂದೂ ದೇವಾಲಯಗಳ ಆದಾಯದಿಂದ ತೆಗೆದುಕೊಳ್ಳಲಾಗಿಲ್ಲ. ಬದಲಿಗೆ ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳ ಮೂಲಕ ಬಳಕೆ ಮಾಡಿಕೊಳ್ಳಲಾಗಿದೆ. 15ನೇ ಪುಟದಲ್ಲಿ ʼಅಲ್ಪಸಂಖ್ಯಾತರ ಕಲ್ಯಾಣʼ ಎಂಬ ಶೀರ್ಷಿಕೆಯಡಿಯಲ್ಲಿ, ರಾಜ್ಯದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು ಮತ್ತು ಜೈನರಂತಹ ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ನಿಗದಿಪಡಿಸಿದ ಬಜೆಟ್ನ ರೂಪರೇಷೆಗಳನ್ನು ನಾವು ಕಂಡುಕೊಂಡೆವು. ವಕ್ಫ್ ಆಸ್ತಿಗಳ ಅಭಿವೃದ್ಧಿಗೆ 100 ಕೋಟಿ ರೂಪಾಯಿಗಳು, ಮಂಗಳೂರು ಹಜ್ ಭವನ ನಿರ್ಮಾಣಕ್ಕೆ 10 ಕೋಟಿ ರೂಪಾಯಿಗಳು, ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂಪಾಯಿಗಳು, ರಾಜ್ಯದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ 20 ಕೋಟಿ ರೂಪಾಯಿಗಳು, ಜೈನರ ಪ್ರಮುಖ ಯಾತ್ರಾ ಸ್ಥಳಗಳ ಅಭಿವೃದ್ಧಿಗೆ 50 ಕೋಟಿ ರೂಪಾಯಿಗಳು, ಸಿಖ್ಖಾ ಲಿಗಾರ್ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ 2 ಕೋಟಿ ರೂಪಾಯಿ ಹಾಗೂ ಬೀದರ್ ಗುರುದ್ವಾರ ಅಭಿವೃದ್ದಿಗೆ 1 ಕೋಟಿ ರೂಪಾಗಿಗಳ ಅನುದಾನಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.
ಅಷ್ಟೇ ಅಲ್ಲ, ವೈರಲ್ ಆಗಿರುವ ಹೇಳಿಕೆಗೆ ವ್ಯತಿರಿಕ್ತವಾಗಿ, ಕರ್ನಾಟಕ ಸರ್ಕಾರವು ಹಿಂದೂ ದೇವಾಲಯಗಳು ಮತ್ತು ಧಾರ್ಮಿಕ ಚಟುವಟಿಕೆಗಳಿಗೂ ಹಣವನ್ನು ಮಂಜೂರು ಮಾಡಿದೆ. ತಿರುಮಲ, ಶ್ರೀಶೈಲ, ವಾರಣಾಸಿ ಮುಂತಾದ ಯಾತ್ರಾ ಸ್ಥಳಗಳಲ್ಲಿ ವಸತಿ ಸಂಕೀರ್ಣಗಳ ನಿರ್ಮಾಣಕ್ಕೆ ಹಣವನ್ನು ನಿಗದಿಪಡಿಸಲಾಗಿದೆ. ಎಲ್ಲಾ 29,523 'ಸಿ' ವರ್ಗದ ದೇವಾಲಯಗಳ ಅರ್ಚಕರಿಗೆ ಪಾವತಿಸಬೇಕಾದ ತಸ್ ದಿಕ್ ಮೊತ್ತಕ್ಕೆ ಹಂಚಿಕೆ ಮಾಡಲಾಗಿದೆ. ಹಿಂದೂ ಧಾರ್ಮಿಕ ದತ್ತಿಗಳಿಗೆ ಮಾಡಿದ ಹಂಚಿಕೆಗಳ ಕುರಿತು ವಿವರಗಳನ್ನು ನೀವಿಲ್ಲಿ ಪರಿಶೀಲಿಸಬಹುದು.
ಕರ್ನಾಟಕದ ದೇವಾಲಯಗಳು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತಿ ಕಾಯ್ದೆ, 1997 ರ ಅಡಿಯಲ್ಲಿ ಬರುತ್ತವೆ. ಹಿಂದೂ ದೇವಾಲಯಗಳಿಂದ ಬರುವ ಗಳಿಕೆಯು ಹಿಂದೂ ಧರ್ಮದ ಉದ್ದೇಶಗಳಿಗಾಗಿ ಮಾತ್ರ, ಬೇರೆ ಯಾವುದೇ ಉದ್ದೇಶಗಳಿಗಾಗಿ ಅಲ್ಲ ಎಂದು ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ. ಕಾಯಿದೆಯ ಪ್ರಕಾರ, ಹಣವನ್ನು ‘ಸಾಮಾನ್ಯ ಪೂಲ್ ನಿಧಿ’ಯಿಂದ ಪಡೆಯಲಾಗುವುದು, ಇದು ರಾಜ್ಯ ಸರ್ಕಾರ ಮತ್ತು ಇತರ ಸಂಸ್ಥೆಗಳಿಂದ ಅನುದಾನವನ್ನು ಪಡೆಯುತ್ತದೆ. ‘ಸಾಮಾನ್ಯ ಪೂಲ್ ನಿಧಿಯ ಆಡಳಿತ’ ಎಂಬ ಉಪವಿಭಾಗದ ಅಡಿಯಲ್ಲಿ, ಹಣವನ್ನು ಹೇಗೆ ಬಳಸಬಹುದು ಎಂಬುದಕ್ಕೆ ಹಲವಾರು ಷರತ್ತುಗಳನ್ನು ವಿವರಿಸಲಾಗಿದೆ.
ಫೆಬ್ರವರಿ 16, 2024ರಂದು ʼಕರ್ನಾಟಕದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿʼ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ, CNN-News18 ನ ಶಿವಶಂಕರ್ ಅವರ ತಪ್ಪು ವರದಿಗೆ ಪ್ರತಿಕ್ರಿಯೆಯಾಗಿ, ದತ್ತಿ ನಿಧಿಯನ್ನು ಹಿಂದೂ ದೇವಾಲಯಗಳಿಗೆ ಮಾತ್ರ ಬಳಸಲಾಗುವುದು ಮತ್ತು ಅದನ್ನು ಇತರ ಉದ್ದೇಶಗಳಿಗೆ ಬಳಸಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಮಾಧ್ಯಮದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಹಿಂದೂ ದೇವಾಲಯಗಳ ಹಣವನ್ನು ಚರ್ಚ್ ಹಾಗೂ ಮಸೀದಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದಲ್ಲಿ ಯಾವುದೇ ಸತ್ಯಾಂಶವಿಲ್ಲ. ಕರ್ನಾಟಕ ಸರ್ಕಾರವು ಹಿಂದೂ ದೇವಾಲಯಗಳ ಆದಾಯದಿಂದ ಅಲ್ಪಸಂಖ್ಯಾತರಿಗೆ ಹಣವನ್ನು ಹಂಚಿಕೆ ಮಾಡಿಲ್ಲ.
|