schema:text
| - Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact checks doneFOLLOW US
Fact Check
Claim
ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನ ಧ್ವಜವನ್ನು ಬೀಸಲಾಗಿದೆ
Fact
ತುಮಕೂರಿನಲ್ಲಿ ಗುಬ್ಬಿ ಗೇಟ್ ಬಳಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನದ ಧ್ವಜವನ್ನು ಬೀಸಲಾಗಿದೆ ಎನ್ನುವುದು ನಿಜವಲ್ಲ
ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನದ ಧ್ವಜವನ್ನು ಬೀಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಶೇರ್ ಮಾಡಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಇದು ತುಮಕೂರಿನ ಗುಬ್ಬಿ ಗೇಟ್ ಬಳಿ ಕಾಂಗ್ರೆಸ್ಸಿನ ಸಭೆ ಮುoದಿನ ಪ್ರಧಾನಿ ರಾಹುಲ್ ಗಾಂಧಿನ ಇಲ್ಲ ನರೇಂದ್ರ ಮೋದಿನ ನೀವೇ ತೀರ್ಮಾನ ಮಾಡಿ” ಎಂದಿದೆ.
Also Read: ರಾಮಭಕ್ತರು ಚರ್ಚ್ ಗೆ ಹೋಗಿ ರಾಮನವಮಿ ಆಚರಿಸಿದ ರೀತಿ ಎಂದ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಇದೇ ರೀತಿಯ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ಕಂಡುಬಂದಿದೆ.
ಈ ಕ್ಲೇಮಿನ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಮಾಧ್ಯಮ ವರದಿಗಳು ಲಭ್ಯವಾಗಿವೆ.
ಏಪ್ರಿಲ್ 23, 2024ರ ಪ್ರಜಾವಾಣಿ ವರದಿಯಲ್ಲಿ “ಪಾಕ್ ಧ್ವಜ ಹಾರಿಸಿದ್ದಾರೆ ಎಂದು ಸುಳ್ಳು ಪೋಸ್ಟ್; ಪ್ರಕರಣ ದಾಖಲು ಎಂದಿದೆ. ಇದರ ಪ್ರಕಾರ, ತುಮಕೂರು ನಗರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರದ ಸಭೆಯಲ್ಲಿ ಪಾಕಿಸ್ಥಾನ ಧ್ವಜ ಹಾರಿಸಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಸುಳ್ಳು ಪೋಸ್ಟ್ ಹಾಕಿದ್ದ ಮುರಳಿ ಪುರುಷೋತ್ತಮ್ ಎಂಬವರ ವಿರುದ್ಧ ತಿಲಕ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದಿದೆ.
Also Read: ರಾಮನವಮಿ ದಿನವೇ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮಾಂಸಾಹಾರ ಊಟ ಮಾಡಿದ್ದಾರೆಯೇ?
ಏಪ್ರಿಲ್ 23, 2024ರ ತುಮಕೂರು ನ್ಯೂಸ್ ವರದಿ ಪ್ರಕಾರ, ತುಮಕೂರಿನ ಕಾಂಗ್ರೆಸ್ ಸಭೆಯಲ್ಲಿ ಪಾಕ್ ಧ್ವಜ, ಸುಳ್ಳು ಸುದ್ದಿ ಹಬ್ಬಿದವರ ವಿರುದ್ಧ ಕೇಸ್ ಎಂದಿದೆ. ಮುರಳಿ ಪುರುಷೋತ್ತಮ್ ಹೆಸರಿನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತುಮಕೂರಿನ ಗುಬ್ಬಿ ಗೇಟ್ ನಲ್ಲಿ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನದ ಧ್ವಜ ಹಾರಿಸಲಾಗಿದೆ ಎಂದು ಫೋಟೋ ಸಹಿತ ಪೋಸ್ಟ್ ಮಾಡಲಾಗಿತ್ತು. ಈ ಬಗ್ಗೆ ಸ್ವತಃ ಜಿಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳು ಫ್ಯಾಕ್ಟ್ ಚೆಕ್ ಮಾಡಿದ್ದು ಅದು ಸುಳ್ಳು ಸುದ್ದಿ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಜೊತೆಗೆ ತುಮಕೂರಿನಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಖಚಿತ ಪಡಿಸಿದ್ದಾರೆ ಎಂದಿದೆ.
ಈ ವರದಿಗಳಿಗೆ ಸಂಬಂಧಿಸಿದಂತೆ ನಾವು ಎಕ್ಸ್ ನಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಪೋಸ್ಟ್ ಅನ್ನೂ ಪತ್ತೆ ಮಾಡಿದ್ದೇವೆ. “ತುಮಕೂರಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ತುಮಕೂರಿನಲ್ಲಿ ಪಾಕಿಸ್ತಾನದ ಧ್ವಜ ಬೀಸಲಾಗಿದೆ ಎಂದು ಸುಳ್ಳು ಸುದ್ದಿ ವಿಡಿಯೋ ವೈರಲ್ ಮಾಡಿದವರ ವಿರುದ್ದ ತಿಲಕ್ ಪಾರ್ಕ್ ಠಾಣೆಯಲ್ಲಿ ಮೊ. ಸಂಖ್ಯೆ 0049/2024 ರಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ಸುಳ್ಳು ಸುದ್ದಿ ಹರಡದಂತೆ ಎಚ್ಚರಿಕೆ ನೀಡಲಾಗಿದೆ.” ಎಂದು ಇದರಲ್ಲಿ ಹೇಳಲಾಗಿದೆ.
ಪಾಕಿಸ್ಥಾನದ ಧ್ವಜದ ಬಗ್ಗೆಯೂ ನಾವು ಶೋಧ ನಡೆಸಿದ್ದು, ಬ್ರಿಟಾನಿಕಾ ಪ್ರಕಾರ, ಪಾಕ್ ಧ್ವಜ ಬಿಳಿ ಪಟ್ಟಿ ಮತ್ತು ಹಸಿರು ಭಾಗವನ್ನು ಹೊಂದಿದ್ದು ಅದರೊಳಗೆ ಅರ್ಧ ಚಂದ್ರ ಮತ್ತು ನಕ್ಷತ್ರವು ಬಿಳಿ ಬಣ್ಣದಲ್ಲಿದೆ. ಈ ಕುರಿತ ವಿವರಗಳನ್ನು ಇಲ್ಲಿ ನೋಡಬಹುದು.
ತುಮಕೂರಿನ ಘಟನೆಗೆ ಸಂಬಂಧಿಸಿದಂತೆ ಇಂತಹ ಯಾವುದೇ ಧ್ವಜವನ್ನು ಹಾರಿಸಲಾಗಿಲ್ಲ ಎಂದು ತುಮಕೂರು ಪೊಲೀಸರು ಸ್ಪಷ್ಟನೆ ನೀಡಿದ ಹಿನ್ನೆಲೆಯಲ್ಲಿ ವೈರಲ್ ವೀಡಿಯೋದ ಮೂಲವನ್ನು ಪತ್ತೆ ಮಾಡಲು ನಾವು ಮುಂದಾಗಿದ್ದೇವೆ. ಆ ಪ್ರಕಾರ ನಾವು ವೈರಲ್ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, “Saleeque Hospital” ಎಂದು ಬೋರ್ಡ್ ಬರೆದಿರುವುದನ್ನು ಕಂಡುಕೊಂಡಿದ್ದೇವೆ.
ಆ ಬಳಿಕ Saleeque Hospital ಎಂಬುದನ್ನು ಗೂಗಲ್ ಕೀವರ್ಡ್ ಸರ್ಚ್ ಮಾಡಿದ್ದು, ಇದು ಬೆಳಗಾವಿಯಲ್ಲಿದೆ ಎಂದು ಕಂಡುಕೊಂಡಿದ್ದೇವೆ. ಆ ವಿಳಾಸವನ್ನು ಪತ್ತೆ ಮಾಡಿದಾಗ ಗೂಗಲ್ ಮ್ಯಾಪ್ ನಲ್ಲಿ ವೈರಲ್ ವೀಡಿಯೋದಲ್ಲಿರುವ ಕಟ್ಟಡವನ್ನು ಹೋಲುವ ಕಟ್ಟಡ ಕಂಡುಬಂದಿದೆ.
ಆ ಬಳಿಕ ನಿರ್ದಿಷ್ಟ ಸ್ಥಳ ಮತ್ತು ವೀಡಿಯೋ ಸತ್ಯಾಸತ್ಯತೆ ತಿಳಿಯಲು ಸ್ಥಳೀಯರು ಮತ್ತು ಬೆಳಗಾವಿಯ ಕಾಂಗ್ರೆಸ್ ನಾಯಕರು, ಮಾಜಿ ಕಾರ್ಪೊರೇಟರ್ ಫಯೀಮ್ ನಾಯಕ್ ವಾಡಿ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್ಚೆಕರ್ ನೊಂದಿಗೆ ಮಾತನಾಡಿ, ನಿರ್ದಿಷ್ಟ ವೀಡಿಯೋ 2018ರ ನಗರಸಭಾ ಚುನಾವಣೆ ಸಮಯದ್ದಾಗಿದೆ. ಕಾಂಗ್ರೆಸ್ ಕಾರ್ಪೊರೇಟರ್ ಅವರ ವಿಜಯಯಾತ್ರೆ ವೇಳೆ ಮುಸ್ಲಿಂ ಧಾರ್ಮಿಕ ಧ್ವಜವನ್ನು ಈ ವೇಳೆ ಪ್ರದರ್ಶಿಸಲಾಗಿತ್ತು. ಯಾವುದೇ ಪಾಕಿಸ್ಥಾನ ಧ್ವಜವನ್ನು ಬಳಸಿಲ್ಲ. ಈ ನಿರ್ದಿಷ್ಟ ಸ್ಥಳ ಬೆಳಗಾವಿಯ ಗಾಂಧಿನಗರ ಪ್ರದೇಶವಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ.
ಈ ಸಾಕ್ಷ್ಯಗಳ ಪ್ರಕಾರ, ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಪಾಕಿಸ್ಥಾನ ಧ್ವಜವನ್ನು ಬೀಸಲಾಗಿದೆ ಎನ್ನುವುದು ಸುಳ್ಳಾಗಿದೆ. ಧ್ವಜ ಮುಸ್ಲಿಂ ಧಾರ್ಮಿಕ ಧ್ವಜವಾಗಿದ್ದು, ಇದನ್ನು ಬೆಳಗಾವಿಯಲ್ಲಿ 2018ರಲ್ಲಿ ಪ್ರದರ್ಶಿಸಲಾಗಿತ್ತು
Also Read: ರಾಹುಲ್ ಗಾಂಧಿಯನ್ನು ನೋಡಲು ಜನಸಾಗರ ಎಂದು ಚಿಕ್ಕೋಡಿ ಎತ್ತಿನ ಗಾಡಿ ಸ್ಪರ್ಧೆಯ ವೀಡಿಯೋ ಹಂಚಿಕೆ
Our Sources:
Report By Prajavani, Dated: April 23, 2024
Report By Tumakur News, Dated: April 23, 2024
X post By SP Tumakur, Dated: April 23, 2024
Article By Britannica: Flag of Pakistan, Meaning, Symbol & History
Conversation with Fayeem Naikwadi, Ex Corporator, Belgaum
Google Maps
(ಈ ಲೇಖನವನ್ನು ಮೇ 1, 2024ರಂದು ಬೆಳಗಾವಿಯ ಕಾಂಗ್ರೆಸ್ ನಾಯಕರು, ಮಾಜಿ ಕಾರ್ಪೊರೇಟರ್ ಫಯೀಮ್ ನಾಯಕ್ ವಾಡಿ ಅವರ ಹೇಳಿಕೆ ಮತ್ತು ಸ್ಥಳದ ಮಾಹಿತಿಯೊಂದಿಗೆ ನವೀಕರಿಸಲಾಗಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
|