schema:text
| - ಫ್ಯಾಕ್ಟ್ಚೆಕ್: ಟಾಟಾ ಗ್ರೂಪ್ 3,249ರೂ.ಗೆ ವಿದ್ಯುತ್ ಬೈಸಿಕಲ್ ಬಿಡುಗಡೆ ಮಾಡಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ
ಟಾಟಾ ಗ್ರೂಪ್ 3,249ರೂ.ಗೆ ವಿದ್ಯುತ್ ಬೈಸಿಕಲ್ ಬಿಡುಗಡೆ ಮಾಡಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ
Claim :
ಟಾಟಾ ಗ್ರೂಪ್ 3,249ರೂ.ಗೆ ವಿದ್ಯುತ್ ಬೈಸಿಕಲ್ ಬಿಡುಗಡೆ ಮಾಡಿದೆFact :
ಟಾಟಾ ವಿದ್ಯುತ್ ಬೈಸಿಕಲ್ನ ಮೂಲ ಬೆಲೆ 27,995 ರೂಭಾರತದ ನಗರಗಳಲ್ಲಿ ವಿಪರೀತ ವಾಯುಮಾಲಿನ್ಯ ಆಗುತ್ತಿದ್ದು ಇಲ್ಲಿನ ಜನರನ್ನು ವಾಯುಮಾಲಿನ್ಯದ ಅಪಾಯದಿಂದ ಪಾರು ಮಾಡಲು ಭಾರತ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ಇದೆ. ರಾಷ್ಟ್ರರಾಜಧಾನಿ ದಿಲ್ಲಿಯಲ್ಲೇ ವಾಯುಮಾಲಿನ್ಯಕ್ಕೆ ಅತಿ ಹೆಚ್ಚು ಸಾವು ನೋವುಗಳಾಗುತ್ತಿವೆ. ವಾಯುವಿನ ಗುಣಮಟ್ಟ ಅತ್ಯಂತ ಕೆಳಸ್ತರದಲ್ಲಿದ್ದು ವರ್ಷಕ್ಕೆ 11 ಸಾವಿರ ಮಂದಿ ಸಾವಿಗೀಡಾಗುತ್ತಿದ್ದಾರೆ. 2ನೇ ಸ್ಥಾನದಲ್ಲಿರುವುದು ದೇಶದ ವಾಣಿಜ್ಯ ನಗರಿಯಾಗಿರುವ ಮುಂಬೈನಲ್ಲಿ, ಇಲ್ಲಿ ವರ್ಷಕ್ಕೆ ಸುಮಾರು 5,100 ಮಂದಿ ವಾಯುಮಾಲಿನ್ಯ ಸಂಬಂಧಿ ಕಾಯಿಲೆಗಳಿಂದಾಗಿ ಕೊನೆಯುಸಿರೆಳೆಯುತ್ತಿದ್ದಾರೆ. ಕೋಲ್ಕತಾದಲ್ಲಿ 4,700 ಮಂದಿ, ಚೆನ್ನೈನಲ್ಲಿ 2900 ಮಂದಿ ಸಾವಿಗೀಡಾಗುತ್ತಿದ್ದಾರೆ. 5ನೇ ಸ್ಥಾನದಲ್ಲಿ ಉದ್ಯಾನ ನಗರಿ ಬೆಂಗಳೂರು ಇದೆ. ಇಲ್ಲಿ ವರ್ಷಕ್ಕೆ 2100 ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿತ್ತು. ಇದರ ನಡುವೆ, ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರವನ್ನು ಮಾಲಿನ್ಯವನ್ನು ತಡೆಗಟ್ಟಲು ಯಾವ ಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿತು. ವಾಹನ ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಯನ್ನು ಉತ್ತೇಜಿಸುತ್ತಿದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ʼಟಾಟಾ ಕಂಪನಿಯು ಕೇವಲ 3,248 ರೂ.ಗಳಿಗೆ ವಿದ್ಯುತ್ ಬೈಸಿಕಲ್ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅತ್ಯಂತ ಅಗ್ಗದ ಮತ್ತು ಉತ್ತಮ ಬೆಲೆಯಾದ 3,000 ರೂ.ಗಳಿಗೆ ಲಭ್ಯವಿರುವ ವಿದ್ಯುತ್ ಬೈಸಿಕಲ್ ಖರೀದಿಸಬಹುದುʼ ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್ ಮಾಡುತ್ತಿದ್ದಾರೆ. ಇನ್ನು ಕೆಲವು ಪೋಸ್ಟ್ಗಳಲ್ಲಿ ʼಟಾಟಾ ಗ್ರೂಪ್ ಪ್ರಪಂಚದಾದ್ಯಂತ ಹಲವು ರೀತಿಯ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ. ವಿಶೇಷವಾಗಿ ಭಾರತದಲ್ಲಿ, ಟಾಟಾ ಆಟೋಮೋಟಿವ್ ಉದ್ಯಮದಲ್ಲಿ ಅಗ್ರ ಬ್ರಾಂಡ್ ಆಗಿ ಹೊರಹೊಮ್ಮುತ್ತಿದೆ. ಹಲವಾರು ವರ್ಷಗಳಿಂದ, ಟಾಟಾ ಕಂಪನಿಯು ವಿದ್ಯುತ್ ವಾಹನಗಳ ಮೇಲೆ ಕೇಂದ್ರೀಕರಿಸಿ ಇತ್ತೀಚೆಗೆ ವಿದ್ಯುತ್ ಚಾಲಿತ ಬೈಸಿಕಲ್ ಅನ್ನು ಸಹ ಬಿಡುಗಡೆ ಮಾಡಿತು. ಇದರ ಹೆಸರು ಟಾಟಾ ಇ-ಸೈಕಲ್. ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಕೇವಲ 3,249 ರೂ. ಒಂದೇ ಚಾರ್ಜ್ನಲ್ಲಿ 100 ಕಿ.ಮೀ.ಗಿಂತ ಹೆಚ್ಚು ದೂರ ಪ್ರಯಾಣಿಸಬಹುದು. ಈ ಸೈಕಲ್ ನಗರಗಳಲ್ಲಿನ ಜನರ ಪ್ರಯಾಣಕ್ಕೆ ಅನುಗುಣವಾಗಿರುತ್ತದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 108 ಕಿ.ಮೀ ಪ್ರಯಾಣಿಸಬಹುದು. ಟಾಟಾ ಎಲೆಕ್ಟ್ರಿಕ್ ಬೈಸಿಕಲ್ನ 250W ಬ್ಯಾಟರಿ ಶಕ್ತಿಯೊಂದಿಗೆ ಸವಾರರು ಗಂಟೆಗೆ 25 ಕಿ.ಮೀ ವೇಗವನ್ನು ತಲುಪಬಹುದು. ಈ 36V, 10Ah ಲಿಥಿಯಂ-ಐಯಾನ್ ಬ್ಯಾಟರಿಯು ಸುಧಾರಿತ ತಂತ್ರಜ್ಞಾನದೊಂದಿಗೆ ಅತ್ಯುತ್ತಮ ಸವಾರಿ ಅನುಭವವನ್ನು ನೀಡುತ್ತದೆ. ಇದನ್ನು ಸುಲಭವಾಗಿ ತೆಗೆದು ಎಲ್ಲಿ ಬೇಕಾದರೂ ಚಾರ್ಜ್ ಮಾಡಬಹುದು. ಇದರ ಬೆಲೆ ಕೇವಲ 3,249 ರೂ. ಇದರ ಬೆಲೆ ಹೀರೋ ಲೆಕ್ಟ್ರೋ (ರೂ. 26,999) ಮತ್ತು ನೆಕ್ಸ್ಝೂ ರೋಡ್ಲಾರ್ಕ್ (ರೂ. 42,000) ನಂತಹ ಸ್ಪರ್ಧಾತ್ಮಕ ಮಾದರಿಗಳಿಗಿಂತ ತೀರಾ ಕಡಿಮೆ. ಅದೇ ರೀತಿ, ಟಾಟಾ ಬ್ರ್ಯಾಂಡ್ ದೇಶಾದ್ಯಂತ ಉತ್ತಮ ಮನ್ನಣೆಯನ್ನು ಹೊಂದಿದೆ. ದೇಶದ ಎಲ್ಲಾ ಭಾಗಗಳಲ್ಲಿರುವ ಸೇವಾ ಕೇಂದ್ರಗಳಲ್ಲಿ ಸೇವೆಗಳನ್ನು ಪಡೆಯಬಹುದುʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಫೆಬ್ರವರಿ 20, 20255ರಂದು ಎಕ್ಸ್ ಖಾತೆದಾರರೊಬ್ಬರು ʼBreaking News. Revolutionary product from TATA.Tata Electric Cycle. Price: ₹3,249. Range: 108 KM/Charge. Modes: Eco/Sports/Normal. Battery: 36V, 10Ah Li-Ion. Display: LCD (speed,🔋,distance traveled & mode). App: Tracking, Locating #TataECycle #GoGreen ಎಂಬ ಶೀರ್ಷಿಕೆಯನ್ನೀಡಿ ಸೈಕಲ್ ಚಿತ್ರವನ್ನು ಹಂಚಿಕೊಂಡಿದ್ದಾರೆ.
Breaking News : 📣📣📣
— 🥳 Jammy 🥳 (@JammyMarso) February 20, 2025
Revolutionary product from TATA
Tata Electric Cycle
Price : ₹3,249
Range : 108 KM/Charge
Modes : Eco/Sports/Normal
Battery : 36V, 10Ah Li-Ion
Display: LCD (speed,🔋,distance traveled & mode)
App : Tracking, Locating#TataECycle#GoGreen pic.twitter.com/8ROgbmTz1d
ವೈರಲ್ ಆದ ಪೋಸ್ಟ್ನ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ತೆಲುಗು ಮಾಧ್ಯಮ ಸಂಸ್ಥೆಯಾದ ʼನ್ಯೂಸ್ 18 ತೆಲುಗುʼ ವೆಬ್ಸೈಟ್ನಲ್ಲಿ ʼElectric Cycle: రూ.3,249కే టాటా ఎలక్ట్రిక్ సైకిల్.. రైడింగ్ రేంజ్ 108 కి.మీ.. ఫీచర్లు ఇవే..!ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಟಾಟಾ ಗ್ರೂಪ್ 3,249 ರೂ.ಗೆ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಬಿಡುಗಡೆಗೊಳಿಸಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ವಾಸ್ತವವಾಗಿ ಬೈಸಿಕಲ್ನ ಮೂಲ ಬೆಲೆ 27,995 ರೂ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಗೂಗಲ್ನಲ್ಲಿ ʼಟಾಟಾ ಗ್ರೂಪ್ 3,249ರೂ.ಗೆ ಇ-ಸೈಕಲ್ ಪರಿಚಯಿಸಿದೆಯಾ?, ಹೊಸಾ ಟಾಟಾ ಎಲೆಕ್ಟ್ರಿಕಲ್ ಸೈಕಲ್ 108ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದೆಯಾ? ಹೀಗೆ ಕೆಲವು ಪ್ರಮುಖ ಕೀವರ್ಡ್ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಆದರೆ ಈ ಕುರಿತು ಯಾವುದೇ ರಾಷ್ಟ್ರೀಯ ಮಾಧ್ಯಮಗಳು ಹಾಗೂ ಅಧಿಕೃತ ಸುದ್ದಿ ಸಂಸ್ಥೆಗಳು ವರದಿಯನ್ನು ಪ್ರಕಟಿಸಿರುವುದು ಕಂಡು ಬಂದಿಲ್ಲ. ಒಂದು ವೇಳೆ ಸುದ್ದಿ ನಿಜವಾಗಿದ್ದಾರೆ ಮಾಧ್ಯಮ ವರದಿಗಳು ಕಂಡು ಬರಬೇಕಿತ್ತು. ಹೀಗಾಗಿ ವೈರಲ್ ಪೋಸ್ಟ್ ಜನ ಸಾಮಾನ್ಯರ ದಾರಿ ತಪ್ಪಿಸುತ್ತಿದೆ ಎಂಬುದು ನಮಗೆ ಖಚಿತವಾಗಿದೆ.
ನಂತರ ನಾವು ವೈರಲ್ ಆದ ಪೊಸ್ಟ್ನಲ್ಲಿ ಕಾಣುವ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಟಾಟಾ ಇಂಟರ್ನ್ಯಾಷನಲ್ನ ಅಂಗಸಂಸ್ಥೆಯಾದ ಸ್ಟ್ರೈಡರ್ ತಯಾರಿಸಿದ ಜೀಟಾ ಪ್ಲಸ್ ಎಲೆಕ್ಟ್ರಿಕ್ ಬೈಸಿಕಲ್ ಎಂದು ತಿಳಿದುಬಂದಿತು. ಸ್ಟ್ರೈಡರ್ ವೆಬ್ಸೈಟ್ನಲ್ಲಿ ಮಾರ್ಚ್ 06,2025ರ ಹೊತ್ತಿಗೆ, ಬೈಸಿಕಲ್ನ ಬೆಲೆ ₹27,995 ಎಂದು ದೃಢಪಡಿಸಲಾಗಿದೆ ಮತ್ತು ವರದಿಗಳು ಇದನ್ನು 2023 ರಲ್ಲಿ ₹26,995 ರ ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿದೆ, 3,249 ರೂಗೆ ಇಎಂಐ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಸ್ಟ್ರೈಡರ್ ಆಗಲಿ ಅಥವಾ ಟಾಟಾ ಇಂಟರ್ನ್ಯಾಷನಲ್ ಆಗಲಿ 3249 ಕ್ಕೆ ಅದೇ ಮಾದರಿಯ ಅಥವಾ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತರುವುದಾಗಿ ಎಲ್ಲಿಯೂ ಘೋಷಿಸಿಲ್ಲ.
ಮಾಹಿತಿಯನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲು ನಾವು ಸ್ಟ್ರೈಡರ್ ಗ್ರಾಹಕ ಸೇವೆಯನ್ನು ಸಂಪರ್ಕಿಸಲು ಪ್ರಯತ್ನಿಸಿದೆವು ಆದರೆ ಪ್ರತಿಕ್ರಿಯೆ ಸಿಗಲಿಲ್ಲ. ನಂತರ ನಾವು ಹೈದರಾಬಾದ್ನಲ್ಲಿರುವ ಡೀಲರ್ಗಳನ್ನು ಹುಡುಕಿದಾಗ ಪೃಧ್ವಿ ಅವರ ಸೈಕ್ಲಿಂಗ್ ಸ್ಟುಡಿಯೋ ಕಂಡುಬಂದಿತು. ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದೇನೆಂದರೆ, ಯಾವುದೇ ಸ್ಟ್ರೈಡರ್ ಸೈಕಲ್ನ್ನು ₹3,249 ಗೆ ಮಾರಾಟ ಮಾಡುತ್ತಿಲ್ಲ ಎಂದು ಹೇಳಿದರು. ವಾಸ್ತವವಾಗಿ, ಬ್ಯಾಟರಿಯ ಬೆಲೆ ಕನಿಷ್ಠ ₹10,000 ಆಗಿದೆ. ವಿವಿಧ ಪರಿಸ್ಥಿತಿಗಳಿಗೆ ಅನುಗುಣವಾಗಿ ಜೀಟಾ ಪ್ಲಸ್ ಮಾದರಿಯು ಒಂದೇ ಚಾರ್ಜ್ನಲ್ಲಿ ಗರಿಷ್ಠ 30 ಕಿಲೋಮೀಟರ್ ಪ್ರಯಾಣಿಸಬಹುದು ಎಂದು ಅವರು ಹೇಳಿದ್ದಾರೆ. ಈ ಮಾಹಿತಿಯು ಸ್ಟ್ರೈಡರ್ ಕಂಪನಿಯ ವೆಬ್ಸೈಟ್ನಲ್ಲಿಯೂ ಲಭ್ಯವಿದೆ.
ವೈರಲ್ ಪೋಸ್ಟ್ನ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ, ಈ ಮಾಹಿತಿಯನ್ನು ಸಮರ್ಥಿಸಲು ಯಾವುದೇ ಪುರಾವೆಗಳಿಲ್ಲ. ಕೆಲವು ಜನರು ತಮ್ಮ ವೆಬ್ಸೈಟ್ಗಳಿಗೆ ಹೆಚ್ಚಿನ ಬಳಕೆದಾರರನ್ನು ಆಕರ್ಷಿಸಲು ಮತ್ತು ಆ ಮೂಲಕ ಹೆಚ್ಚಿನ ಜಾಹೀರಾತುಗಳನ್ನು ಪ್ರದರ್ಶಿಸಲು ಈ ರೀತಿಯ ಸುಳ್ಳು ಕಥೆಗಳನ್ನು ಪ್ರಕಟಿಸುತ್ತಾರೆ ಎಂದು ವಿವಿಧ ಅಧ್ಯಯನಗಳು ಹೇಳಿವೆ .
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಟಾಟಾ ಗ್ರೂಪ್ 3,249 ರೂ.ಗೆ ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಬಿಡುಗಡೆಗೊಳಿಸಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ವಾಸ್ತವವಾಗಿ ಬೈಸಿಕಲ್ನ ಮೂಲ ಬೆಲೆ 27,995 ರೂ.
|