ಫ್ಯಾಕ್ಟ್ಚೆಕ್: ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಭಾಷಣ ಎಂದು ಸಿನಿಮಾದ ಕ್ಲಿಪ್ ಹಂಚಿಕೆ
ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಭಾಷಣ ಎಂದು ಸಿನಿಮಾದ ಕ್ಲಿಪ್ ಹಂಚಿಕೆ
Claim :ಸ್ವಾಮಿ ವಿವೇಕಾನಂದರ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದ ವಿಡಿಯೋ ಪತ್ತೆ
Fact :ವೈರಲ್ ವಿಡಿಯೋ ವಿವೇಕಾನಂದರ ಆತ್ಮಕತೆಯ ಸಿನಿಮಾಗೆ ಸಂಬಂಧಿಸಿದ್ದು
ಸ್ವಾಮಿ ವಿವೇಕಾನಂದರು ಭಾರತ ಕಂಡ ಶ್ರೇಷ್ಠ ಹಿಂದೂ ಸನ್ಯಾಸಿಗಳಲ್ಲಿ ಒಬ್ಬರು. ಭಾರತವು ಯಾವಾಗಲೂ ಹೆಮ್ಮೆಪಡುವ ಆಧ್ಯಾತ್ಮಿಕ ನಾಯಕ ಮಾತ್ರವಲ್ಲದೆ ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಇಂದಿಗೂ ನಾವು ಭಾರತೀಯರು ಮಾತ್ರವಲ್ಲದೆ ಇಡೀ ಜಗತ್ತು ಅವರ ತತ್ವಗಳನ್ನು ಗೌರವಿಸುತ್ತದೆ ಮತ್ತು ಅನುಸರಿಸುತ್ತದೆ. ಮುಂದಿನ ಪೀಳಿಗೆಗೆ ಈ ಮಹಾನ್ ವ್ಯಕ್ತಿತ್ವದ ಬಗ್ಗೆ ಅರಿವು ಮೂಡಿಸುವುದು ನಮ್ಮ ದೊಡ್ಡ ಜವಾಬ್ದಾರಿಗಳಲ್ಲಿ ಒಂದಾಗಿದೆ. 1893ರ ಸೆಪ್ಟೆಂಬರ್ 11ರಿಂದ 27ರವರೆಗೆ ಚಿಕಾಗೋದ "ಕೊಲಂಬಿಯನ್ ಜಾಗತಿಕ ಮೇಳ"ದ ಅಂಗವಾಗಿ ನಡೆದ ವಿಶ್ವಧರ್ಮ ಸಮ್ಮೇಳನ ಪ್ರಪಂಚದ ಇತಿಹಾಸದಲ್ಲೇ ಮಹತ್ವಪೂರ್ಣ ಘಟನೆಯಾಗಿದೆ.ಹಿಂದೂಧರ್ಮದ ಚ್ರಿತ್ರೆಯಲ್ಲಿ ಹೊಸ ಅಧ್ಯಾಯವೊಂದಕ್ಕೆ ಇದು ನಾಂದಿ ಹಾಡಿತ್ತು. ಯುವಜನತೆಯಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಮತ್ತು ಸಮಾಜ ಕಲ್ಯಾಣ ಕಾರ್ಯಗಳ ಕುರಿತು ಅರಿವು ಮೂಡಿಸುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಅಮೆರಿಕದ ಚಿಕಾಗೋದಲ್ಲಿ 1893ರ ಸೆಪ್ಟೆಂಬರ್ 11ರಂದು ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ್ದ ಭಾಷಣದ ನಿಜವಾದ ವಿಡಿಯೋ ಲಭ್ಯವಾಗಿದೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ವಿವೇಕಾನಂದರ ಹಾಗೆ ಇರುವ ವ್ಯಕ್ತಿಯನ್ನು ನೋಡಬಹುದು.
ಸಿಂಗರ್ ಕಾಲು ಶರ್ಮಾ ಎಂಬ ಇನ್ಸ್ಟಾಗ್ರಾಮ್ ಖಾತೆದಾರ ತನ್ನ ಖಾತೆಯಲ್ಲಿ ʼ#दुर्लभ_वीडियो| कितने भाई होंगे जिन्होंने आज तक हिदू ह्रदय सम्राट #स्वामी_विवेकानंद_जी को देखा भी नही होगा जिन्होंने डूबते हुए सनातन धर्म को बचाया उन्हीश्री स्वामी विवेकानंद जी का ये एक दुर्लभ वीडियो लाया हूँ स्वामी विवेकानन्द ने अमेरिका के शिकागो में 13 सितम्बर1893 को दिया व्याख्यान।जरूर सुने| ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿರುವ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಅಪರೂಪದ ವಿಡಿಯೋವಿದು. 1893ರ ಸೆಪ್ಟೆಂಬರ್ 13ರಂದು ಅಮೆರಿಕದ ಚಿಕಾಗೋದಲ್ಲಿ ಉಪನ್ಯಾಸ ನೀಡಿದ ವಿಡಿಯೋ ದೊರಕಿದೆ. ಹಿಂದೂ ಹೃದಯ ಸಾಮ್ರಾಟ ಸ್ವಾಮಿ ವಿವೇಕಾನಂದರು ಮುಳುಗಿ ಹೋಗುತ್ತಿದ್ದ ಸನಾತನ ಧರ್ಮವನ್ನು ಉಳಿಸಿದವರು.ವಿವೇಕಾನಂದರ ಅಪರೂಪದ ವಿಡಿಯೋವನ್ನು ನಿಮಗಾಗಿ ತಂದಿದ್ದೇನೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಜನವರಿ 12, 2025ರಂದು ʼವಾಯ್ಸ್ ಆಫ್ ಗುರ್ಜಾರ್ʼ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ʼस्वामी विवेकानंद जी का दुर्लभ वीडियोʼ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಕನ್ನಡಕ್ಕೆ ಅನುವಾದಿಸಿದಾಗ ʼಸ್ವಾಮಿ ವಿವೇಕಾನಂದರ ಅಪರೂಪದ ವಿಡಿಯೋʼ ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನ್ಯೂಸ್ ಇಂಡಿಯಾ ಎಕ್ಸ್ಪ್ರೆಸ್ 24x7 ಎಂಬ ಯೂಟ್ಯೂಬ್ ಖಾತೆಯಲ್ಲಿ ʼश्री स्वामी विवेकानंद जी के व्याख्यान का एक दुर्लभ वीडियोʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮತ್ತೊಂದು ವಿಡಿಯೋವನ್ನು ನೀವಿಲ್ಲಿ ನೋಡಬಹುದು
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ ಸ್ವಾಮಿ ವಿವೇಕಾನಂದರು 1893ರ ಸೆಪ್ಟೆಂಬರ್ 13ರಂದು ಅಮೆರಿಕದ ಚಿಕಾಗೋದಲ್ಲಿ ನೀಡಿದ ಭಾಷಣದ ಕ್ಲಿಪ್ಪಿಂಗ್ ಅಲ್ಲ. ಈ ವಿಡಿಯೋ ಯೂಟ್ಯೂಬ್ನಲ್ಲಿ ʼಸ್ವಾಮಿ ವಿವೇಕಾನಂದರ ಆತ್ಮಕಥೆʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡ ವಿಡಿಯೋವಿನ ಕ್ಲಿಪ್.
ನಾವು ವೈರಲ್ ಆದ ವಿಡಿಯೋವಿನ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಸೆಪ್ಟಂಬರ್ 28, 2018ರಂದು ʼಶ್ರೀ ರಾಮಕೃಷ್ಣ ಮಠ ಚೆನ್ನೈʼ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ʼस्वामी विवेकानंद की आत्मकथा | Full Movie | हिंदी | उन्ही के शब्दों में | Vivekananda Ki Atmakathaʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎರಡು ಗಂಟೆ ಏಳು ನಿಮಿಷವಿರುವ ಈ ವಿಡಿಯೋವಿನಲ್ಲಿ 02:07:03 ನಿಮಿಷವಿರುವ ಈ ಚಿತ್ರದಲ್ಲಿ 13:37 ಸೆಕೆಂಡ್ಗಳಿಂದ 16:00 ನಿಮಿಷದವರೆಗೆ ನಾವು ವೈರಲ್ ಆದ ವಿಡಿಯೋನ್ನು ನೋಡಬಹುದು. ವೈರಲ್ ಆದ ವಿಡಿಯೋ ಸ್ವಾಮಿ ವಿವೇಕಾನಂದರ ಜೀವನಗಾತೆಯ ಸಿನಿಮಾದ ದೃಶ್ಯಾವಳಿಗಳಾಗಿವೆ ಎಂಬುದು ನಮಗೆ ಖಚಿತವಾಗಿದೆ.
ಸೆಪ್ಟಂಬರ್ 20, 2018ರಂದು ʼಸ್ವಾಮಿ ವಿವೇಕಾನಂದ ಹೈ ಸ್ಕೂಲ್. ಪಂಚವಟಿ, ನಾಸಿಕ್ ಅಲಿಮಿಸಿ ಗೂಪ್ʼ ಎಂಬ ಫೇಸ್ಬುಕ್ ಖಾತೆಯಲ್ಲಿ ʼ१८९३ मध्ये शिकागो येथे झालेल्या धर्म परिषदेमध्ये भाषण करताना स्वामी विवेकानंद ! संग्रही ठेवावी अशी अत्यंत दुर्मिळ चित्रफीतʼ ಎಂದು ಕ್ಯಾಪ್ಷನ್ ನೀಡಿ ಹಂಚಿಕೊಂಡಿದ್ದಾರೆ. ಕನ್ನಡಕ್ಕೆ ಅನುವಾದಿಸಿದಾಗ ʼ1893 ರಲ್ಲಿ ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಧರ್ಮ ಪರಿಷತ್ತಿನಲ್ಲಿ ಭಾಷಣ ಮಾಡಿದರು. ಬಹಳ ಅಪರೂಪದ ಚಿತ್ರವಿದುʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ
ನಾವು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ಗೂಗಲ್ನಲ್ಲಿ ನಾವು ಹುಡುಕಾಟ ನಡೆಸಿದಾಗ ನಮಗೆ ಸೆಪ್ಟಂಬರ್ 12, 2017ರಂದು ʼನ್ಯೂಸ್ ಹಿಂದೂಸ್ತಾನ್ 24ʼ ಎಂಬ ಯೂಟ್ಯೂಬ್ ಖಾತೆಯಲ್ಲಿ ʼOriginal Speech - Swami Vivekananda Chicago Speech In Hindi Original | Full Lenght | Uncut Speechʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ನಾವು ಗೂಗಲ್ನಲ್ಲಿ ಸ್ವಾಮಿ ವಿವೇಕಾನಂದರ ಮೂಲ ಧ್ವನಿ ಎಂಬ ಕೀವರ್ಡ್ ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸ್ವಾಮಿ ವಿವೇಕಾನಂದರ ಭಾಷಣದ ಯಾವುದೇ ಮೂಲ ಧ್ವನಿ ಇರುವ ಆಡಿಯೋಗಳು ಕೂಡ ಪತ್ತೆಯಾಗಿಲ್ಲ.
ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ ಸ್ವಾಮಿ ವಿವೇಕಾನಂದರು 1893ರ ಸೆಪ್ಟೆಂಬರ್ 13ರಂದು ಅಮೆರಿಕದ ಚಿಕಾಗೋದಲ್ಲಿ ನೀಡಿದ ಭಾಷಣದ ಕ್ಲಿಪ್ಪಿಂಗ್ ಅಲ್ಲ. ಈ ವಿಡಿಯೋ ಯೂಟ್ಯೂಬ್ನಲ್ಲಿ ʼಸ್ವಾಮಿ ವಿವೇಕಾನಂದರ ಆತ್ಮಕಥೆʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡ ವಿಡಿಯೋವಿನ ಕ್ಲಿಪ್.