schema:text
| - Authors
Claim
ನಾಳೆಯಿಂದ ಮಂಗಳೂರಲ್ಲಿ ಹೊಸ ರೂಲ್ಸ್ ಜಾರಿ, ಬೈಕಿನಲ್ಲಿ ಇಬ್ಬರು ಪುರುಷ ಸವಾರರು ಸಂಚರಿಸುವಂತಿಲ್ಲ
Fact
ನಾಳೆಯಿಂದ ಮಂಗಳೂರಲ್ಲಿ ಹೊಸ ರೂಲ್ಸ್ ಜಾರಿ ಬೈಕ್ ನಲ್ಲಿ ಇಬ್ಬರು ಪುರುಷ ಸವಾರರಿಗೆ ನಿಷೇಧ ಎಂಬ ಸುದ್ದಿ 2022ರದ್ದಾಗಿದ್ದು ಈಗ ತಪ್ಪಾದ ಸಂದರ್ಭದಲ್ಲಿ ಹಂಚಿಕೊಳ್ಳಲಾಗುತ್ತಿದೆ
ನಾಳೆಯಿಂದ ಮಂಗಳೂರಲ್ಲಿ ಹೊಸ ರೂಲ್ಸ್ ಜಾರಿ ಎಂಬ ಹೇಳಿಕೆಯಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವಾಟ್ಸಾಪ್ ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ, ಬೈಕಿನಲ್ಲಿ ಇಬ್ಬರು ಪುರುಷರು ಪ್ರಯಾಣಿಸುವಂತಿಲ್ಲ, ಇದಕ್ಕೆ ಪೊಲೀಸರು ನಿರ್ಬಂಧ ಹೇರಿದ್ದಾರೆ ಎಂದಿದೆ.
ಈ ಬಗ್ಗೆ ಸತ್ಯಶೋಧನೆ ನಡೆಸುವಂತೆ ನ್ಯೂಸ್ಚೆಕರ್ ಟಿಪ್ ಲೈನ್ (+91-9999499044) ಗೆ ಬಳಕೆದಾರರು ಮನವಿ ಮಾಡಿದ್ದು, ಅದನ್ನು ಅಂಗೀಕರಿಸಲಾಗಿದೆ.
ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು 2022ರ ಸಂದರ್ಭದಲ್ಲಿ ಹೊರಡಿಸಿದ ಆದೇಶವಾಗಿದ್ದು ಆ ಬಳಿಕ ಅದೇ ದಿನ ಸಾರ್ವಜನಿಕರ ವಿರೋಧ ಹಿನ್ನೆಲೆಯಲ್ಲಿ ವಾಪಸ್ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
Also Read: ಒತ್ತೆಯಾಳುಗಳಾಗಿದ್ದ ಹಿಂದೂ ಯುವತಿಯರನ್ನು ವ್ಯಕ್ತಿಯೊಬ್ಬ ರಕ್ಷಿಸುತ್ತಿರುವ ವೀಡಿಯೋ ನಿಜವಲ್ಲ, ಅದು ಸ್ಕ್ರಿಪ್ಟೆಡ್!
Fact Check/Verification
ಸತ್ಯಶೋಧನೆಗಾಗಿ ನಾವು ಈ ಸುದ್ದಿಯ ಬಗ್ಗೆ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ವೀಡಿಯೋ ಯೂಟ್ಯೂಬ್ ನಲ್ಲಿದೆ ಮತ್ತು ಇದು ಪಬ್ಲಿಕ್ ಟಿವಿಯ ವೀಡಿಯೋ ಆಗಿದೆ ಎಂಬುದನ್ನು ಕಂಡುಕೊಂಡಿದ್ದೇವೆ.
ಆಗಸ್ಟ್ 4, 2022ರಂದು ಪಬ್ಲಿಕ್ ಟಿವಿ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಿದ ವೀಡಿಯೋ ಇದಾಗಿದ್ದು, “ನಾಳೆಯಿಂದ ಮಂಗಳೂರಿನಲ್ಲಿ ಹೊಸ ರೂಲ್ಸ್ ಜಾರಿ”ಎಂಬ ಶೀರ್ಷಿಕೆಯಿದೆ. “ಕ್ರೈಂ ಕೇಸ್ ಗಳ ಹಿನ್ನೆಲೆಯಲ್ಲಿ, ಹಿಂಬದಿ ಸವಾರನಿಂದ ಅಹಿತಕರ ಘಟನೆಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ 1 ವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾರಿಯಾಗಲಿದೆ. ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಈ ನಿರ್ಬಂಧ ಇರುವುದಿಲ್ಲ” ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಹೇಳುವುದು ಈ ವೀಡಿಯೋದಲ್ಲಿದೆ.
ಇದರ ಬಗ್ಗೆ ಕೀವರ್ಡ್ ಸರ್ಚ್ ನಡೆಸಿದಾಗ ಹಲವು ವರದಿಗಳು ಲಭ್ಯವಾಗಿವೆ.
ಆಗಸ್ಟ್ 4, 2022ರ ವಿ4 ನ್ಯೂಸ್ ವರದಿ ಪ್ರಕಾರ, “ದ.ಕ. ಜಿಲ್ಲೆಯಲ್ಲಿ ಅಹಿತಕರ ಘಟನೆ ತಪ್ಪಿಸಲು ಜಿಲ್ಲೆಯಾದ್ಯಂತ ತುರ್ತಾಗಿ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿ ಮಾಡುವುದನ್ನು ನಿಷೇಧಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಾಗಿ ಬಂದು ಅಪರಾಧ ಕೃತ್ಯಗಳಲ್ಲಿ ತೊಡಗಿಸುತ್ತಿದ್ದಾರೆ ಎಂಬ ಮಾಹಿತಿ ನೆಲೆಯಲ್ಲಿ ಪುರುಷ ವ್ಯಕ್ತಿಗಳು ಹಿಂಬದಿ ಸವಾರಿ ಮಾಡುವುದನ್ನು ನಿಷೇಧಿಸಲಾಗುವುದು. ಹೊಸ ನಿಯಮ ಆಗಸ್ಟ್ 5ರಿಂದಲೇ ಜಾರಿಗೆ ಬರಲಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.” ಎಂದಿದೆ.
ಆಗಸ್ಟ್ 4, 2022ರ ವಿಜಯ ಕರ್ನಾಟಕ ವರದಿ ಪ್ರಕಾರ, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ವಾರದವರೆಗೆ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಯುವ ಸವಾರರು ಓಡಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು, ಇದೀಗ ಇರುವ ರಾತ್ರಿ ನಿರ್ಬಂಧವನ್ನು ಹಂತಹಂತವಾಗಿ ಸಡಿಲಿಕೆ ಮಾಡಲಾಗುತ್ತದೆ. ಆ ಬಳಿಕ ಮುನ್ನೆಚ್ಚರಿಕಾ ದೃಷ್ಟಿಯಿಂದ ದ್ವಿಚಕ್ರ ವಾಹನಗಳಲ್ಲಿ ಇಬ್ಬರು ಪುರುಷ ಸವಾರರ ಓಡಾಟಕ್ಕೆ ಕಡಿವಾಣ ಹಾಕಲಾಗುತ್ತದೆ. ಆದರೆ, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಈ ನಿರ್ಬಂಧ ಇರುವುದಿಲ್ಲ ಎಂದು ಹೇಳಿದರು.” ಎಂದಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ಬಗ್ಗೆ ಇನ್ನಷ್ಟು ಶೋಧ ನಡೆಸಿದಾಗ ಆಗಸ್ಟ್ 4, 2022ರಂದು ಪಬ್ಲಿಕ್ ಟಿವಿಯ ಸಂಜೆ 6 ಗಂಟೆಯ ವರದಿಯಲ್ಲಿ, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಪುರುಷ ಸವಾರರಿಗೆ ಅವಕಾಶ ಇಲ್ಲ ಎಂದು ಜಾರಿಗೆ ಮುಂದಾಗಿದ್ದ ಆದೇಶವನ್ನು ಜಿಲ್ಲಾಡಳಿತ ಹಿಂತೆಗೆದುಕೊಂಡಿದೆ. ನಗರದಲ್ಲಿ ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಪುರುಷ ಸವಾರರಿಗೆ ಅವಕಾಶ ಇಲ್ಲ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿದ್ದರು. ಆ ಬಳಿಕ ಸಾರ್ವಜನಿಕ ವಲಯದಲ್ಲಿ ಈ ನಿಯಮದ ವಿರುದ್ಧ ತೀವ್ರ ಆಕ್ರೋಶ ಕೇಳಿ ಬಂದಿತ್ತು. ಆ ಬಳಿಕ ಇದೀಗ ಜಿಲ್ಲಾಡಳಿತ ಆದೇಶ ರದ್ದು ಮಾಡಿದೆ.” ಎಂದಿದೆ.
ಈ ಬಗ್ಗೆ ಉದಯವಾಣಿಯ ಮಂಗಳೂರು ಬ್ಯೂರೋ ಮುಖ್ಯ ವರದಿಗಾರ ವೇಣುವಿನೋದ್ ಕೆ.ಎಸ್. ಅವರನ್ನು ನ್ಯೂಸ್ ಚೆಕರ್ ಸಂಪರ್ಕಿಸಿದ್ದು, “2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಕೋಮು ವೈಷಮ್ಯದ ಕೊಲೆಗಳ ಹಿನ್ನೆಲೆಯಲ್ಲಿ ಪೊಲೀಸರು ಬೈಕ್ ನಲ್ಲಿ ಇಬ್ಬರು ಪುರುಷರು ಓಡಾಡುವುದಕ್ಕೆ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಬಳಿಕ ವ್ಯಾಪಕ ವಿರೋಧ ವ್ಯಕ್ತವಾದ್ದರಿಂದ ಇದನ್ನು ವಾಪಾಸ್ ತೆಗೆದುಕೊಳ್ಳಲಾಗಿತ್ತು” ಎಂದು ಹೇಳಿದ್ದಾರೆ.
Conclusion
ಈ ಸತ್ಯಶೋಧನೆ ಪ್ರಕಾರ, ನಾಳೆಯಿಂದ ಮಂಗಳೂರಲ್ಲಿ ಹೊಸ ರೂಲ್ಸ್ ಜಾರಿ ಬೈಕ್ ನಲ್ಲಿ ಇಬ್ಬರು ಪುರುಷ ಸವಾರರಿಗೆ ನಿಷೇಧ ಎಂಬ ಸುದ್ದಿ 2022ರದ್ದಾಗಿದ್ದು ಈಗಿನದ್ದಲ್ಲ. ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.
Also Read ಮಹಾ ಕುಂಭಮೇಳದಲ್ಲಿ ಸನ್ಯಾಸಿಯಂತೆ ವೇಷ ಧರಿಸಿದ ಉಗ್ರನ ಬಂಧನ? ವೈರಲ್ ಫೋಟೋ ಹಿಂದಿನ ಸತ್ಯ ಇಲ್ಲಿದೆ
Result: Missing Context
Our Sources
Report By V4 news, Dated: August 4, 2022
Report By Vijayakarnataka, Dated: August 4, 2022
YouTube Video By Public TV, Dated: August 4, 2022
Report By Public TV, Dated: August 4, 2022
Conversation with Venuvinod K S, Chief reporter for Udayavani Mangalore Bureau
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
|