schema:text
| - ಫ್ಯಾಕ್ಟ್ಚೆಕ್: ಚಂದ್ರ ಆರ್ಯರವರು ಕೆನಡಾ ಸಂಸತ್ನಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ್ದಾರೆ ಎಂದು ಎರಡು ವರ್ಷ ಹಳೆಯ ವಿಡಿಯೋವನ್ನು ಹಂಚಿಕೆ
ಚಂದ್ರ ಆರ್ಯರವರು ಕೆನಡಾ ಸಂಸತ್ನಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ್ದಾರೆ ಎಂದು ಎರಡು ವರ್ಷ ಹಳೆಯ ವಿಡಿಯೋವನ್ನು ಹಂಚಿಕೆ
Claim :ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿದ ಬಳಿಕ ಚಂದ್ರ ಆರ್ಯ ಕನ್ನಡದಲ್ಲಿ ಮಾತನಾಡಿದ್ದಾರೆ
Fact :ಚಂದ್ರ ಆರ್ಯ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಎರಡು ವರ್ಷ ಹಳೆಯದು
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಹಠಾತ್ ರಾಜೀನಾಮೆಯಿಂದ ಮುಂದಿನ ಪ್ರಧಾನಿ ಯಾರಾಗಬಹುದು ಎಂಬ ಕುತೂಹಲ ಮೂಡಿದೆ. ಈಗಾಗಲೇ ಹಲವು ಪ್ರಮುಖ ನಾಯಕರು ಪ್ರಧಾನಿ ರೇಸ್ನಲ್ಲಿದ್ದು, ಕನ್ನಡಿಗ ಚಂದ್ರ ಆರ್ಯ ಕೂಡ ಕೆನಡಾ ಪ್ರಧಾನಿ ಹುದ್ದೆಯ ಅಕಾಂಕ್ಷಿಯಾಗಿದ್ದಾರೆ. ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ದ್ವಾರಾಳು ಗ್ರಾಮದ ಮೂಲದವರಾಗಿರುವ ಚಂದ್ರ ಆರ್ಯ ಅವರು ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದು, ಬಳಿಕ ಅವರು ಕನ್ನಡದಲ್ಲಿಯೇ ಮಾತನಾಡಿರುವುದು ದೊಡ್ಡ ಮಟ್ಟದಲ್ಲಿ ಸದ್ದಾಗಿದೆ.
ಚಂದ್ರ ಆರ್ಯರವರು ಕನ್ನಡದಲ್ಲಿ ಹೇಳಿದ್ದೇನೆಂದರೆ, “ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ, ಸಿರಾ ತಾಲೂಕಿನ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಮತ್ತು ಕನ್ನಡದಲ್ಲಿ ಮಾತನಾಡುವುದು, ಸುಮಾರು ಐದು ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದರು”. ರಾಷ್ಟ್ರಕವಿ ಕುವೆಂಪು ಬರೆದಿರುವ ಹಾಗೂ ನಟಸಾರ್ವಭೌಮ ಡಾ. ರಾಜ್ಕುಮಾರ್ ಹಾಡಿರುವ ಭಾವಗೀತೆ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಹೇಳುವ ಮೂಲಕ ಮಾತು ಮುಗಿಸಿದರು.
ಜನವರಿ 17, 2025ರಂದು ಪಬ್ಲಿಕ್ ಟಿವಿ ಕನ್ನಡ ವೆಬ್ಸೈಟ್ನಲ್ಲಿ ʼಕೆನಡಾ ಪ್ರಧಾನಿ ಹುದ್ದೆಗೆ ಕನ್ನಡಿಗನ ನಾಮಪತ್ರ – ಭಾಷಣದ ಕೊನೆಯಲ್ಲಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದ ಚಂದ್ರ ಆರ್ಯʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು
ವೈರಲ್ ಆದ ಸುದ್ದಿಗೆ ಸಂಬಂಧಿಸಿದ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು
ಜನವರಿ 18, 2025ರಂದು ಕನ್ನಡ ಮಾಧ್ಯಮ ಸಂಸ್ಥೆಯಾದ ʼಟಿವಿ5 ಕನ್ನಡʼ ಯೂಟ್ಯೂಬ್ ಚಾನೆಲ್ನಲ್ಲಿ ʼKannadiga Chandra Arya In Canadian PM Race | ಕೆನಡಾ ಪ್ರಧಾನಿ ಹುದ್ದೆ ರೇಸ್ನಲ್ಲಿ ಕನ್ನಡಿಗ | World News ಎಂಬ ಶೀರ್ಷಿಕೆಯೊಂದಿಗೆ ಚಂದ್ರ ಆರ್ಯ ಕನ್ನಡದಲ್ಲಿ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಜನವರಿ 17, 2025ರಂದು ʼಚಕ್ರವರ್ತಿ ಸೂಲಿಬೆಲೆʼ ಎಂಬ ಎಕ್ಸ್ ಖಾತೆದಾರರು ʼಕೆನಡಾದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇರುವ ಶ್ರೀ ಚಂದ್ರ ಆರ್ಯ ತಮ್ಮ ನಾಮಪತ್ರ ಸಲ್ಲಿಕೆಗೂ ಮುನ್ನ ಕನ್ನಡದಲ್ಲಿ ಮಾತನಾಡಿದಾಗʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಜನವರಿ 17, 2025ರಂದು ಸರಿತಾ ಚೌಬೇ ಎಂಬ ಎಕ್ಸ್ ಖಾತೆದಾರರು ʼNever forget your roots, feeling proud to see this moment. Canadian MP Chandra Arya officially enters race to become Canada's next Prime Minister and speaks in Kannada after filing his nomination. he hails from Tumkur in Karnatakaʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಈ ಕ್ಷಣವನ್ನು ನೋಡಿ ಹೆಮ್ಮೆಪಡುವ ನಿಮ್ಮ ಬೇರುಗಳನ್ನು ಎಂದಿಗೂ ಮರೆಯಬೇಡಿ. ಕೆನಡಾದ ಸಂಸದ ಚಂದ್ರ ಆರ್ಯರವರು ಕೆನಡಾದ ಮುಂದಿನ ಪ್ರಧಾನಿಯಾಗಲು ಅಧಿಕೃತವಾಗಿ ರೇಸ್ಗೆ ಪ್ರವೇಶಿಸಿದರು ಮತ್ತು ನಾಮಪತ್ರ ಸಲ್ಲಿಸಿದ ನಂತರ ಕನ್ನಡದಲ್ಲಿ ಮಾತನಾಡುತ್ತಾರೆ. ಅವರು ಕರ್ನಾಟಕದ ತುಮಕೂರಿನವರುʼ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು.
ಟಿವಿ9 ಕನ್ನಡ ಮಾಧ್ಯಮ ಸಂಸ್ಥೆಯಲ್ಲಿ ವರದಿಯಾಗಿರುವ ಸ್ಕ್ರೀನ್ಶಾಟ್ನ್ನು ನೀವಿಲ್ಲಿ ನೋಡಬಹುದು.
ಇದೇ ರೀತಿಯ ಪೋಸ್ಟ್ಗಳನ್ನು ವಾರ್ತಾ ಭಾರತಿ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳೂ ಹಂಚಿಕೊಂಡಿದೆ. ಅವನ್ನು ಇಲ್ಲಿ, ಇಲ್ಲಿ, ಕಾಣಬಹುದು.
ಫ್ಯಾಕ್ಟ್ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಕನ್ನಡಿಗ ಚಂದ್ರ ಆರ್ಯ ಅವರು ಇತ್ತೀಚೆಗೆ ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದಾರೆ ಎಂಬ ಸುದ್ದಿ ಸುಳ್ಳು. ವೈರಲ್ ಆದ ವಿಡಿಯೋ 2022ರದ್ದು.
ನಾವು ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್ಗಳನ್ನು ಉಪಯೋಗಿಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ , ಮೇ 20, 2022ರಂದು ಆಜ್ತಕ್ ವೆಬ್ಸೈಟ್ನಲ್ಲಿ ʼजब कनाडा की संसद में कन्नड़ भाषा में दिया गया भाषण, तालियों की गड़गड़ाहट से गूंज उठा सदन ʼ ಎಂಬ ಶೀರ್ಷಿಕೆಯೊಂದಿಗೆ ವರದಿಯಾಗಿರುವುದನ್ನು ನಾವಿಲ್ಲಿ ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕೆನಡಾದ ಸಂಸತ್ತಿನಲ್ಲಿ ಕನ್ನಡ ಭಾಷೆಯಲ್ಲಿ ಭಾಷಣ ಮಾಡಿದಾಗ, ಕೆನಡಾದ ಸಂಸತ್ತಿನ ಸದನವು ಚಪ್ಪಾಳೆಯಿಂದ ಪ್ರತಿಧ್ವನಿಸಿತ್ತುʼ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ʼಚಂದ್ರ ಆರ್ಯರವರು 2015ರಲ್ಲಿ ಮೊದಲ ಬಾರಿಗೆ ಕೆನಡಾದಲ್ಲಿ ಸಂಸದರಾಗಿ ಆಯ್ಕೆಯಾದರು. 2019ರಲ್ಲಿ ಮತ್ತೆ ಸಂಸದರಾದರು. ಇತ್ತೀಚೆಗೆ ಕೆನಡಾ ಸಂಸತ್ತಿನಲ್ಲಿ ಕನ್ನಡ ಭಾಷೆಯಲ್ಲಿ ಮಾತಾನಾಡಿ ಎಲ್ಲರ ಪ್ರಶಂಸೆಗೆ ಪಾತ್ರದಾಗಿದ್ದಾರೆ ಎಂದು ವರದಿಯಾಗಿದೆ.
ಮೇ 21, 2022ರಂದು ʼದಿ ಇಂಡಿಯನ್ ಎಕ್ಸ್ಪ್ರೆಸ್ ಯೂಟ್ಯೂಬ್ ಚಾನೆಲ್ನಲ್ಲಿ ʼCanadian MP Chandra Arya from Karnataka speaks in Kannada in Parliamentʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ವಿಡಿಯೋವಿಗೆ ಕ್ಯಾಪ್ಷನ್ ಆಗಿ ʼಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯರವರು ಗುರುವಾರ ಕೆನಡಾ ಸಂಸತ್ತಿನಲ್ಲಿ ತಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡಿದರು. ತಮ್ಮ ಅನುಭವದ ಕ್ಲಿಪ್ ಅನ್ನು ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ ಎಂಬ ಬರೆದಿರುವುದನ್ನು ನಾವು ಕಂಡುಕೊಂಡೆವು.
ಇದನ್ನೇ ಸುಳಿವಾಗಿ ತೆಗೆದುಕೊಂಡು ನಾವು ಚಂದ್ರ ಆರ್ಯರವರ ಸಾಮಾಜಿಕ ಮಾಧ್ಯಮಗಳನ್ನು ತನಿಖೆ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಮೇ 22, 2022ರಂದು ಚಂದ್ರ ಆರ್ಯರವರ ಅಧಿಕೃತ ಎಕ್ಸ್ ಖಾತೆಯಲ್ಲಿ ವೈರಲ್ ಆದ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವುದನ್ನು ನಾವು ನೋಡಬಹುದು. ಈ ವಿಡಿಯೋದಲ್ಲಿ ಅವರು ʼಕೆನಡಾದ ಸಂಸತ್ತಿನಲ್ಲಿ ನಾನು ನನ್ನ ಮಾತೃಭಾಷೆಯಾದ ಕನ್ನಡದಲ್ಲಿ ಮಾತನಾಡಿದ್ದೇನೆ. ದೀರ್ಘವಾದ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಐವತ್ತು ಮಿಲಿಯನ್ ಜನರು ಮಾತನಾಡುತ್ತಾರೆ. ಜಗತ್ತಿನಲ್ಲಿ ಭಾರತದ ಹೊರಗಿನ ಸಂಸತ್ತಿನಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊಟ್ಟ ಮೊದಲು” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಮೇ 20, 2022ರಂದು ʼಹಿಂದೂಸ್ತಾನ್ʼ ಯೂಟ್ಯೂಬ್ ಚಾನೆಲ್ನಲ್ಲಿ ʼViral: India-born MP Chandra Arya's Kannada speech in Canadian Parliament stuns netizensʼ ಎಂಬ ಶೀರ್ಷಿಕೆನ್ನೀಡಿ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ವಿಡಿಯೋವಿಗೆ ಕ್ಯಾಪ್ಷನ್ ಆಗಿ ʼIndia-born Canadian MP Chandra Arya is winning hearts online after a video of his speech at the Canadian Parliament in Kannada went viral. Arya delivered a speech in his mother tongue - Kannada. Arya, who represents the electoral district of Nepean, Ontario, in the House of Commons, the lower house of Canada, tweeted a video of his address, saying Kannada is a beautiful language spoken by about five crore people. He said that this is the first time when Kannada is spoken in any Parliament outside India. Netizens including politicians have lauded Arya for the video. Watch to know moreʼ ಎಂದು ಕ್ಯಾಪ್ಷನ್ನ್ನೀಡಿದ್ದರು. ಶೀರ್ಷಿಕೆ ಮತ್ತು ಕ್ಯಾಪ್ಷನ್ನ್ನು ಕನ್ನಡಕ್ಕೆ ಅನುವಾದಿಸಿದಾಗ ʼಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾಡಿದ ಭಾಷಣದ ವಿಡಿಯೋ ವೈರಲ್ ಆದ ನಂತರ ಭಾರತ ಮೂಲದ ಕೆನಡಾದ ಸಂಸದ ಚಂದ್ರ ಆರ್ಯ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನ ಗೆದ್ದಿದ್ದಾರೆ. ಕೆನಡಾದ ಲೋವರ್ ಹೌಸ್ ಆಫ್ ಕಾಮನ್ಸ್ನಲ್ಲಿ ಒಂಟಾರಿಯೊದ ನೆಪಿಯನ್ನ ಚುನಾವಣಾ ಜಿಲ್ಲೆಯನ್ನು ಪ್ರತಿನಿಧಿಸುವ ಆರ್ಯ, ತಮ್ಮ ಭಾಷಣದ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಕನ್ನಡವು ಸುಮಾರು ಐದು ಕೋಟಿ ಜನರು ಮಾತನಾಡುವ ಸುಂದರ ಭಾಷೆಯಾಗಿದೆ ಎಂದು ಹೇಳಿದ್ದಾರೆ. ಭಾರತದ ಹೊರಗಿನ ಯಾವುದೇ ಸಂಸತ್ತಿನಲ್ಲಿ ಕನ್ನಡ ಮಾತನಾಡುವುದು ಇದೇ ಮೊದಲು ಎಂದು ಹೇಳಿರುವುದನ್ನು ನಾವಿಲ್ಲಿ ನೋಡಬಹುದು. ರಾಜಕಾರಣಿಗಳು ಸೇರಿದಂತೆ, ಸಾಮಾಜಿಕ ಜಾಲತಾಣದ ಬಳಕೆದಾರರು ಆರ್ಯ ಅವರನ್ನು ಶ್ಲಾಘಿಸಿದ್ದಾರೆ ಎಂದು ಬರೆದಿರುವುದನ್ನು ನಾವಿಲ್ಲಿ ನೋಡಬಹುದು.
ಮತ್ತಷ್ಟು ಮಾಧ್ಯಮ ವರದಿಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು.
ಒಂದು ವೇಳೆ ಚಂದ್ರ ಆರ್ಯರವರು ಸಂಸತ್ತಿನಲ್ಲಿ ಇತ್ತೀಚಿಗೆ ಕನ್ನಡದಲ್ಲಿ ಮಾತನಾಡಿದ್ದರೆ ಅದನ್ನು ಇಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಬೇಕಿತ್ತು. ಆದರೆ ನಮಗೆ ಅಂತಹ ಯಾವುದೇ ವರದಿಯಾಗಲಿ, ಸಾಮಾಜಿಕ ಮಾಧ್ಯಮದಲ್ಲಿ ಪೊಸ್ಟ್ ಆಗಲಿ ಕಂಡುಬಂದಿಲ್ಲ.
ಇದರಿಂದ ಸಾಭೀತಾಗಿದ್ದೇನೆಂದರೆ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ಚಂದ್ರ ಆರ್ಯ ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದು ನಿಜ ಆದರೆ ಅದು ಇತ್ತೀಚಿಗೆ ಅಲ್ಲ, ವೈರಲ್ ಆದ ವಿಡಿಯೋ ಎರಡು ವರ್ಷ ಹಳೆಯದ್ದು ಅಂದರೆ, ಮೇ 2022ರದ್ದು ಎಂದು ಸ್ಪಷ್ಟವಾಗಿದೆ
|